ಕುಂದಾಪುರ: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿಶ್ವ ಹಸಿರು ಕಟ್ಟಡ ಸಪ್ತಾಹದ ಅಂಗವಾಗಿ ಕೋಡಿ ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮ ಸೆ. 26 2021ರಂದು ಯಶಸ್ವಿಯಾಗಿ ಜರುಗಿತು.
ಸ್ವಚ್ಛ ಕಡಲತೀರ – ಹಸಿರು ಕೋಡಿ ಎಂಬ ಧ್ಯೇಯವಾಕ್ಯದೊಂದಿಗೆ “ನಾವೆಲ್ಲರೂ ಜೊತೆಯಾಗಿ ನಮ್ಮ ಕೋಡಿ ಕಡಲ ತೀರವನ್ನು ಸ್ವಚ್ಛ ಮತ್ತು ಹಸಿರಾಗಿಸೋಣ” ಎನ್ನುವ ಪರಿಕಲ್ಪನೆ ಯಶಸ್ವಿಯಾಗಿ ಸಾಕಾರಗೊಂಡಿತ್ತು. ಸಪ್ತಾಹದ ಅಂಗವಾಗಿ ಹಳೆ ಅಳಿವೆಯಿಂದ ಡೆಲ್ಟಾ ಪಾಯಿಂಟ್ ವರೆಗಿನ ಕಡಲ ತೀರವನ್ನು ಸ್ವಚ್ಛಗೊಳಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಇಂದಿನ ಈ ಕಾರ್ಯಕ್ರಮದ ಪ್ರಮುಖ ರೂವಾರಿಗಳು ಮಕ್ಕಳು. ಅವರು ಕೈಗೊಂಡ ಈ ಕೆಲಸ ದೇವರ ಕೆಲಸ. ಯಾವುದು ಪರಿಸರದ ಹೊರಗಡೆ ಇದೆಯೋ ಅವೆಲ್ಲವೂ ನಮ್ಮ ದೇಹದ ಒಳಗಡೆ ಸೇರುತ್ತವೆ. ಪರಿಸರ ಕಲುಷಿತಗೊಂಡರೆ ಗಾಳಿ, ನೀರು, ಆಹಾರ ಸೇವನೆಯಿಂದ ನಮ್ಮ ದೇಹದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ನಂತಹ ವಸ್ತುಗಳ ಬಳಕೆಯನ್ನು ತಡೆಯುವುದು, ಪರಿಸರ ಸ್ನೇಹಿ ವಸ್ತುಗಳನ್ನು ಮರು ಬಳಕೆಗೆ ಒಳಪಡಿಸುವುದರಿಂದ ಪರಿಸರ ಸಂರಕ್ಷಣೆ ಮಾಡಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಬ್ಯಾರಿ, ಕೋಡಿ ಕಡಲತೀರ ಸ್ವಚ್ಛತೆ, ಹಸಿರು ಕೋಡಿ ಯೋಜನೆಯಿಂದ ವಿಶ್ವದಲ್ಲಿ ಕೋಡಿ ಪರಿಸರವು ವಿಶೇಷವಾಗಿ ಗುರುತಿಸಲ್ಪಡುವಂತಾಗಬೇಕೆಂಬ ಆಕಾಂಕ್ಷೆಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
