“ವಿದ್ಯಾರ್ಥಿಗಳ ವ್ಯಕ್ತಿತ್ವ ಅನಾವರಣಕ್ಕಾಗಿ ವಿವಿಧ ವಿಷಯ ಸಂಘಗಳ ಅಗತ್ಯವಿದೆ” – ಡಾ. ರಾಜೇಂದ್ರ ನಾಯಕ್
ಮಂಗಳೂರು: ಪ್ರತಿಭೆ ಎನ್ನುವುದು ಎಲ್ಲರಲ್ಲಿಯೂ ಸುಪ್ತವಾಗಿರುವಂತದ್ದು, ಅದಕ್ಕೊಂದು ಅವಕಾಶ ಸಿಕ್ಕಾಗ ಅದು ಅರಳುತ್ತದೆ, ಬೆಳೆಯುತ್ತದೆ. ಪ್ರತಿಭೆ ಅನಾವರಣದಲ್ಲಿ ಅಹಂಕಾರ ಎನ್ನುವುದು ಮೊಳಕೆಯೊಡೆಯಕೂಡದು, ಪರಸ್ಪರ ಪ್ರತಿಭೆಯನ್ನು ಪ್ರೋತ್ಸಾಹಿಸುವ, ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ಅನಾವರಣಕ್ಕಾಗಿ ವಿವಿಧ ವಿಷಯ ಸಂಘಗಳ ಅಗತ್ಯವಿದೆ ಎಂದು ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಂದ್ರ ನಾಯಕ್ ಹೇಳಿದರು.
ಅವರು ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ವಿವಿಧ ವಿಷಯ ಸಂಘಗಳ ಉಧ್ಘಾಟಕರಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀಯುತ ದೋಮ ಚಂದ್ರಶೇಖರ್ ಮಾತನಾಡಿ “ಪ್ರಪಂಚ ಎನ್ನುವುದು ಬಹು ದೊಡ್ಡ ಶಾಲೆಯಿದ್ದಂತೆ, ನೈಜ ಬದುಕಿನ ಪಾಠ ಕಲಿಯುವುದು ಪ್ರಪಂಚದ ವಿವಿಧ ಸನ್ನಿವೇಶದಲ್ಲಿ, ಈ ಹಿನ್ನಲೆಯಲ್ಲಿ ಬದುಕಿಗೆ ಬೇಕಿರುವ ಕೌಶಲಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಲ್ಪಡುವ ಚಟುವಟಿಕೆಗಳ ಮೂಲಕ ರೂಢಿಸಿಕೊಳ್ಳಬಹುದು” ಎಂದರು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಫಿರ್ದೋಸ್ ಶುಭಾಂಶನ ನುಡಿಗಳನ್ನಾಡಿದರು. ಉಪನ್ಯಾಸಕರಾದ ಶ್ರೀ ಪ್ರವೀಣ್ ಕುಮಾರ್ ಕೆ.ಪಿ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀ ವೆಂಕಟೇಶ್ ಎಸ್ ವಿವಿಧ ವಿಷಯ ಸಂಘಗಳ ಧ್ಯೇಯಗಳ ಕುರಿತು ಹೇಳಿದರು. ಶ್ರೀ ಅನಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಎಲಿಟಾ ನಿರೂಪಿಸಿದರು, ಕುಮಾರ್ ಸಂದೀಪ್ ವಂದಿಸಿದರು.